“ಮೈ ಬೆಳಗಾವಿ” ಆ್ಯಪ್ (My Belagavi App) ಬಳಕೆ ಮೂಲಕ ಆಂಬುಲೆನ್ಸ್ ಸೇವೆ, ಪ್ರವಾಸಿ ತಾಣಗಳ ಮಾಹಿತಿ, ಬಸ್ ಸಂಚಾರದ ಸಮಗ್ರ ಮಾಹಿತಿ, ಮನೆಯಲ್ಲೇ ಕುಳಿತು ನಗರ ಬಸ್ ಲೈವ್ ಲೊಕೇಶನ್ ಪತ್ತೆ ಮಾಡಬಹುದು. ಸರ್ಕಾರಿ ಜಿಲ್ಲಾ ಕಚೇರಿಗಳ ಮಾಹಿತಿ ಹಾಗೂ ಸಾರ್ವಜನಿಕರು ಈ ಆ್ಯಪ್ ಮೂಲಕ ನೇರವಾಗಿ ದೂರು ನೊಂದಣಿ ಮಾಡಬಹುದು ಎಂದು ಸ್ಮಾರ್ಟ್ ಸಿಟಿ (Belagavi Smart City) ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಬಾಗೇವಾಡಿ (Praveen Bagewadi) ಅವರು ತಿಳಿಸಿದರು.
ವಿಶ್ವೇಶ್ವರಯ್ಯ ನಗರದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ (ICCC) ನಲ್ಲಿ ಸೋಮವಾರ (ಮೇ.16) ನಡೆದ “ಮೈ ಬೆಳಗಾವಿ” ಆ್ಯಪ್ ಮೂಲಕ ಸಾರ್ವಜನಿಕ ಸೇವೆ (citizen services) ಗಳ ಕುರಿತು ಅವರು ಮಾತನಾಡಿದರು.
ನಗರದಲ್ಲಿ 1 ಲಕ್ಷ 10 ಸಾವಿರ ಮನೆಗಳಿಗೆ ಆರ್ ಎಸ್ಐಡಿ (RFID TAG) ಟ್ಯಾಗ್ ಅಳವಡಿಸಲಾಗಿದೆ. ಪ್ರತಿ ದಿನ ಕಸ ಸಂಗ್ರಹಣೆ ವಾಹನಗಳ ಮೇಲೆ ನಿಗಾ ವಹಿಸಲಾಗಿದ್ದು, ಈಗಾಗಲೇ ಮಹಾನಗರ ಪಾಲಿಕೆ ಹಸ್ತಾಂತರ ಮಾಡಲಾಗಿದೆ. ಈ ವ್ಯವಸ್ಥೆ ಮಹಾನಗರ ಪಾಲಿಕೆ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಕಸಕೊಪ್ಪ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಲಕ್ಷ್ಮಿ ಟೇಕ್ ನ 2 ಟ್ಯಾಂಕ್ ನಲ್ಲಿ ಶುದ್ಧೀಕರಣ ಅಳೆಯುವ ಮಾಪನ ಅಳವಡಿಸಲಾಗಿದೆ. ಅದೇ ರೀತಿ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಆಗುವಂತಹ ನೀರಿನ ಗುಣಮಟ್ಟದ ಮೇಲೆ ಕೂಡ ಸಂಪೂರ್ಣ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
- Advertisement -
ನಗರದಲ್ಲಿ ತಕ್ಷಣ ಆಂಬುಲೆನ್ಸ್ ಸೇವೆ (Ambulance service) ಸಾರ್ವಜನಿಕರಿಗೆ ಒದಗಿಸಲು ನಿಟ್ಟಿನಲ್ಲಿ ಮೈ ಬೆಳಗಾವಿ ಮೂಲಕ ಅಂಬುಲೆನ್ಸ್ ಇರುವ ಲೈವ್ ಲೊಕೇಶನ್ ಪತ್ತೆಮಾಡಿ ನೇರವಾಗಿ ಅಂಬುಲೆನ್ಸ್ ಚಾಲಕನ ಮೊಬೈಲ್ ಸಂಖ್ಯೆ ದೊರೆಯಲಿದೆ. ಇದರಿಂದ ಸಾರ್ವಜನಿಕರು ತಕ್ಷಣ ತುರ್ತುಸೇವೆ ಪಡೆಯಬಹುದು ಎಂದು ಬಾಗೇವಾಡಿ ತಿಳಿಸಿದರು.
ನಗರದ ಬ್ಲಾಕ್ ಸ್ಪಾಟ್ ಗಳ ಮೇಲೆ ನಿಗಾ:
ನಗರದ ಎಲ್ಲೆಡೆ ಕಸ ಎಸೆಯುವುದು ಹಾಗೂ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಕ್ಯಾಮೆರಾ ಮೂಲಕ ನಗರದ ಬ್ಲಾಕ್ ಸ್ಪಾಟ್ (Black spot) ಗಳ ಬಗ್ಗೆ ನಿಗಾ ವಹಿಸಬೇಕು. ಕಸ ಎಸೆಯುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಸ್ವಚ್ಛತೆ ಬಗ್ಗೆ ಎಲ್ಲಾ ಅಂಗಡಿ ಮಾಲೀಕರಿಗೆ ಈ ಕುರಿತು ಸೂಚನೆ ನೀಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ ತಿಳಿಸಿದರು.
ಟ್ರಾಫಿಕ್ ಸಿಗ್ನಲ್:
ನಗರದಲ್ಲಿ ಒಟ್ಟು 20 ಟ್ರಾಫಿಕ್ ಸಿಗ್ನಲ್ (Traffic signals) ಗಳಿದ್ದು, 16 ಹೊಸ ಸಿಗ್ನಲ್ ಹಾಗೂ 4 ಹಳೆ ಟ್ರಾಫಿಕ್ ಸಿಗ್ನಲ್ ಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದರು.
ಬಸ್ ಗಳಿಗೆ ಜಿಪಿಎಸ್ ಅಳವಡಿಕೆ:
ಕೇಂದ್ರ ಬಸ್ ನಿಲ್ದಾಣದಿಂದ ನಗರದಲ್ಲಿ 108 ಸಂಚಾರ ಮಾರ್ಗಗಳಿವೆ.ಈ ವರೆಗೆ 62 ಬಸ್ ಗಳಿಗೆ ಜಿಪಿಎಸ್ (GPS) ಅಳವಡಿಕೆ ಮಾಡಲಾಗಿದೆ. ಅದರಲ್ಲಿ 48 ಜಿಪಿಎಸ್ ಗಳು ಸಕ್ರಿಯವಾಗಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಬೆಂಕಿ ದುರಂತ ನಿರ್ವಹಣೆ;
ನಗರ ಅತಿ ವೇಗವಾಗಿ ಬೆಳೆಯುತ್ತಿದೆ ಹಾಗಾಗಿ ನಗರಗಳಲ್ಲಿ ಬೆಂಕಿ ದುರಂತ ಸಂಭವಿದರೆ, ಅಂತಹ ತುರ್ತು ನಿರ್ವಹಣೆಗೆ 24 ಗಂಟೆಗಳ ನೀರು ಸರಬರಾಜ ಮಾಡುವಂತಹ ಹೈಡ್ರೆಜ್ (ಜಲದಾರೆ) ಸೌಲಭ್ಯ ಒದಗಿಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮನವಿ ಮಾಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
***