ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ರಾಜ್ಯದ ಗಡಿಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಕುಗನೊಳ್ಳಿ ಹಾಗೂ ಕಾಗವಾಡ ಚೆಕ್ ಪೋಸ್ಟ್ ಗಳಿಗೆ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅಲ್ಲಿ ನಿಯೋಜಿತ ಅಧಿಕಾರಿಗಳು ಹಾಗೂ ತಂಡಗಳ ಸಿಬ್ಬಂದಿ ಜತೆ ಚರ್ಚೆ ನಡೆಸಿದ ಅವರು, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಯಲ್ಲಿ ವಿಶೇಷ ಸರ್ವೇಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಸಹ 72 ಗಂಟೆ ಒಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ವರದಿ ನೆಗೆಟಿವ್ ಹೊಂದಿರುವುದು ಕಡ್ಡಾಯವಾಗಿದೆ.
ಒಂದು ವೇಳೆ ಕುಟುಂಬದಲ್ಲಿ ಮರಣ ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಯ ಹಿನ್ನೆಲೆಯಲ್ಲಿ ರಾಜ್ಯವನ್ನು ಪ್ರವೇಶಿಸ ಬಯಸುವ ಪ್ರಯಾಣಿಕರಿಗೆ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ( ರ್ಯಾಟ್ ) ಮಾಡಿಸಬೇಕು. ಅದರ ವರದಿ ನೆಗೆಟಿವ್ ಇದ್ದರೆ ಅವಕಾಶ ಕಲ್ಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
- Advertisement -
ನೆರೆಯ ರಾಜ್ಯದಿಂದ ಬಸ್ ಮೂಲಕ ಆಗಮಿಸುವ ಪ್ರಯಾಣಿಕರ ಕೋವಿಡ್ ಪರೀಕ್ಷಾ ವರದಿಯನ್ನು ನಿರ್ವಾಹಕರು ಪರಿಶೀಲಿಸಬೇಕು.
ಖಾಸಗಿ ವಾಹನಗಳ ಮೂಲಕ ಆಗಮಿಸುವ ಎಲ್ಲ ವಾಹನಗಳನ್ನು ಪರಿಶೀಲಿಸಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ವಾಹನ ಪರಿಶೀಲನೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಕೂಡ ನಿರ್ವಹಿಸಬೇಕು ಎಂದು ಗಡಿ ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿತ ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.
- Advertisement -
ಇದೇ ಸಂದರ್ಭದಲ್ಲಿ ಕಾಗವಾಡ ಬಳಿಯ ಚೆಕ್ ಪೋಸ್ಟ್ ಕೂಡ ಜಿಲ್ಲಾಧಿಕಾರಿ ಹಿರೇಮಠ ಪರಿಶೀಲಿಸಿದರು.
ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಇದೇ ವೇಳೆ ಚಿಕ್ಕೋಡಿ ಬಳಿಯ ಮಾಂಜರಿ ಸೇತುವೆಯ ಬಳಿ ಕೃಷ್ಣಾ ನದಿಯ ಹರಿವು ಪ್ರಮಾಣವನ್ನು ಜಿಲ್ಲಾಧಿಕಾರಿ ಹಿರೇಮಠ ಪರಿಶೀಲಿಸಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಅವರು, ಕೋವಿಡ್ ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಪ್ರವಾಹ ನಿರ್ವಹಣೆಯ ಕ್ರಮಗಳನ್ನು ವಿವರಿಸಿದರು.
ತಹಶೀಲ್ದಾರರು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸ್ಥಳೀಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.