ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಈ ಚುನಾವಣೆ ನಡೆಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರೋದು ಈಗ ಬಹಿರಂಗವಾಗಿದೆ. 13.54 ಕೋಟಿ ರೂಪಾಯಿ ಒಟ್ಟು ವೆಚ್ಚವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಒಂದು ಉಪಚುನಾವಣೆಗೆ ಇಷ್ಟು ಖರ್ಚು ಮಾಡಿದರೆ, ಇನ್ನೂ ಇಡೀ ದೇಶದ ಚುನಾವಣೆಗೆ ಎಷ್ಟು ಕೋಟಿಗಳು ಬೇಕು ಎನ್ನುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಚುನಾವಣೆ ನಡೆಸಲು ಆಯೋಗ ಖರ್ಚು ಮಾಡಿರೋ ಹಣದ ಲೆಕ್ಕ ಇದು. ಇನ್ನೂ ಪಕ್ಷಗಳು ರ್ಯಾಲಿ, ಸಮಾವೇಶ ಹಾಗೂ ಕಾರ್ಯಕರ್ತರಿಗೆ ಅಂತೆಲ್ಲ ಎಷ್ಟು ವೆಚ್ಚ ಮಾಡಿರಬಹುದು ಎನ್ನುವ ಕುತೂಹಲ ಮೂಡಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2566 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ 30 ಸಾವಿರ ರೂಪಾಯಿಯನ್ನು ನಿಗಧಿ ಮಾಡಲಾಗಿದೆ. ಇದರ ಒಟ್ಟು ವೆಚ್ಚ 8.69 ಕೋಟಿ ರೂಪಾಯಿ ಆಗಿದೆ. ಇನ್ನೂ ಜಿಲ್ಲಾಧಿಕಾರಿ ಕಚೇರಿಗೆ 1 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ. ಆದರೇ ಈ ಹಣ ಯಾವ ಉದ್ದೇಶಕ್ಕೆ ಬಳಕೆ ಆಗಿದೆ ಎಂಬುದು ಮಾಹಿತಿ ನೀಡಿಲ್ಲ. 1289 ಮತಗಟ್ಟೆಗಳ ವೆಬ್ ಕಾಸ್ಟಿಂಗ್ ಗಾಗಿ 1.41 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ವಿವಿಧ ಕಾಮಗಾರಿಗಾಗಿ 1.32 ಕೋಟಿ ರೂಪಾಯಿ, ಕೋವಿಡ್ ನಿಯಮ ಪಾಲಿಸಲು ಸಾಮಗ್ರಿ ಪೂರೈಸಲು 72 ಲಕ್ಷ ರೂಪಾಯಿ ಹಣ ವೆಚ್ಚ ಮಾಡಲಾಗಿದೆ.
ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರ ಸ್ಥಾಪನೆಗೆ 61 ಲಕ್ಷ ರೂ. ಖರ್ಚು ಮಾಡಲಾಗಿದೆ. ಇವಿಎಂ ಬೆಂಗಳೂರಿನಿಂದ ಬೆಳಗಾವಿಗೆ ತರಲು 27 ಲಕ್ಷ, ಮತ ಎಣಿಕೆ ಕೇಂದ್ರದ ಪೆಂಡಾಲ್ ಸೇರಿ ಇತರೇ ಕೆಲಸಕ್ಕಾಗಿ 17 ಲಕ್ಷ ರೂಪಾಯಿ, ಮತ ಎಣಿಕೆ ಕೇಂದ್ರ ಸೌಂಡ್ ಸಿಸ್ಟಮ್, ಪ್ಯಾನ್, ಕೂಲರ್ ಗಾಗಿ 18 ಲಕ್ಷ ರೂಪಾಯಿ ಖಚ್ಚು ಮಾಡಲಾಗಿದೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿರೋ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಇದು ದುಂದು ವೆಚ್ಚವಾಗಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.