ಕಿತ್ತೂರು ಐತಿಹಾಸಿಕ ತಾಣಗಳ ಅಭಿವೃದ್ಧಿಗಾಗಿ 50 ಕೋಟಿ ರೂ. ಒದಗಿಸುವುದಾಗಿ ಘೋಷಿಸಲಾಗಿದ್ದು ಇದಕ್ಕೆ 2021-22ರಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಈ ಕ್ರಿಯಾ ಯೋಜನೆಯಡಿ ರಾಣಿ ಚೆನ್ನಮ್ಮನವರ ಸ್ಮಾರಕ ಭವನ ನಿರ್ಮಾಣ, ಚೌಕಿಮಠ ಗದ್ದುಗೆ ಅಭಿವೃದ್ಧಿ ಹಾಗೂ ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ಇದರೊಂದಿಗೆ ಚೆನ್ನಮ್ಮನ ಸಮಾಧಿಯ ಸ್ಥಳದ ಅಭಿವೃದ್ಧಿ, ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮನ ಪ್ರತಿಮೆ ಹಾಗೂ ಇತಿಹಾಸ ಸಾರುವ ಫಲಕ ನಿರ್ಮಾಣ, ಕಿತ್ತೂರು ಸಂಸ್ಥಾನದ ಕಾಗದಪತ್ರಗಳ ಸಂರಕ್ಷಣೆ, ಇತಿಹಾಸವನ್ನು ಸಾರುವ ಶಿಲ್ಪಕಲೆ ಸೇರಿದಂತೆ ಮೊದಲಾದವುಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ತೀರ್ಮಾನಿಸಲಾಯಿತು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಆರಂಭವಾದಾಗಿನಿಂದ ಈ ವರೆಗೆ ಸುಮಾರು 19 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 106 ಕಾಮಗಾರಿಗಳಲ್ಲಿ 104 ಕಾಮಗಾರಿಗಳು ಪೂರ್ಣಗೊಂಡಿವೆ. ಮಿಕ್ಕ ಎರಡು ಕಾಮಗಾರಿಗಳು ಸಹ ಶೀಘ್ರದಲ್ಲೇ ಮುಗಿಯಲಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕಿತ್ತೂರ ರಾಣಿ ಚೆನ್ನಮ್ಮನ ಅರಮನೆಯ ಪುನರ್ ನಿರ್ಮಾಣವನ್ನು ರಾಜ್ಯ ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಕೈಗೊಳ್ಳಲು ಸೂಚಿಸಿದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಸ್ಮಾರಕಗಳ ನಿರ್ವಹಣೆಗೆ ಸಂಪನ್ಮೂಲ ಸೃಜಿಸಲು ಅಂದರೆ ಸರ್ಕಾರದ ನೆರವಿನ ಜೊತೆಗೆ ಖಾಸಗಿಯವರ ನೆರವು ಸೇರಿದಂತೆ ಇತರೆ ಕ್ರಮ ಕೈಗೊಳ್ಳಲು ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.
- Advertisement -
ಪ್ರವಾಸೋದ್ಯಮ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಬ್ರಿಟಿಷರ ವಿರುದ್ದ ಹೋರಾಡಿದ ನಮ್ಮ ನಾಡಿನ ಹೆಮ್ಮೆಯ ಕಿತ್ತೂರ ರಾಣಿ ಚನ್ನಮ್ಮ ಅವರ ಗತ ವೈಭವ ನಮ್ಮ ನಾಡಿನ ಮಕ್ಕಳಿಗೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಅಭಿವೃದ್ದಿ ಪಡಿಸಬೇಕು ಈ ರೀತಿಯಲ್ಲಿ ಅಧಿಕಾರಿಗಳು ಯೋಚಿಸಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೂಚಿಸಿದರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಳಗಾವಿ ಜಿಲ್ಲೆಯ ಶಾಸಕರು, ಮಡಿವಾಳೇಶ್ವರ ಸ್ಮಾಮೀಜಿ ಹಾಗೂ ಪ್ರಾಧಿಕಾರದ ಮತ್ತಿತರ ಸದಸ್ಯರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು