ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ನಿನ್ನೆ (16 May) ಒಂದೇ ದಿನದಲ್ಲಿ 6.14 ಕೋಟಿ ಗಿಂತಲೂ ಹೆಚ್ಚು ಆದಾಯ ಸಂಗ್ರಹಿಸಿದೆ. ಇದು ಸಂಸ್ಥೆಗೆ ಎರಡು ವರ್ಷಗಳ ನಂತರದ ಅತೀ ಹೆಚ್ಚು ಸಂಗ್ರಹವಾದ ಆದಾಯ (Revenue collection).
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಹಾಗೂ ಮಿತವ್ಯಯಕರ ಸಾರಿಗೆ ಸೇವೆಯನ್ನು ಒದಗಿಸುತ್ತಾ ಬಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (North Western Karnataka Road Transport Corporation) ಯು ಕಳೆದ 2 ವರ್ಷಗಳಿಂದ ಕೋವಿಡ್ (Covid19) ಕಾರಣದಿಂದಾಗಿ ಆರ್ಥಿಕವಾಗಿ ಸಾಕಷ್ಟು ಆರ್ಥಿಕ ಮುಗ್ಗಟ್ಟನ್ನು ಎದುರಿಸಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಸಾರಿಗೆ ಕಾರ್ಯಾಚರಣೆ (Fully operational) ಪ್ರಾರಂಭವಾಗಿದ್ದರೂ ಸಹ, ನಿರೀಕ್ಷಿತ ಮಟ್ಟದ ಆದಾಯ ಸಂಗ್ರಹವಾಗಿರಲಿಲ್ಲ, ಆದರೆ 2022 ಮೇ ತಿಂಗಳಿನಲ್ಲಿ ಸಂಸ್ಥೆಯ ಆದಾಯವು ಸರಾಸರಿ 5.22 ಕೋಟಿ ರೂ. ಗಳಷ್ಟು ಆದಾಯ ಸಂಗ್ರಹವಾಗುತ್ತು.
ಬಹಳ ದಿನಗಳ ನಂತರ ಅಂದರೆ ದಿನಾಂಕ: 16/05/2022 ರಂದು 6.14 ಕೋಟಿ (ಆರು ಕೋಟಿ ಹದಿನಾಲ್ಕು ಲಕ್ಷ ರೂ ಗಳಿಗಿಂತಲೂ ಹೆಚ್ಚಿಗೆ) ಸಾರಿಗೆ ಆದಾಯ ಸಂಗ್ರಹವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಿನ ಸಾರಿಗೆ ಆದಾಯವಾಗಿದೆ.
ಈ ನಿಟ್ಟಿನಲ್ಲಿ ಅತೀ ಹೆಚ್ಚಿನ ಸಾರಿಗೆ ಆದಾಯ ಸಂಗ್ರಹಿಸಲು ಕಾರಣೀಭೂತರಾದ ಚಾಲನಾ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು, ಘಟಕ ವ್ಯವಸ್ಥಾಪಕರು ಹಾಗೂ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಶ್ರಮವಹಿಸಿ ಸಂಸ್ಥೆಯ ಸಾರಿಗೆ ಆದಾಯ ಹೆಚ್ಚಿಸಲು ಪ್ರಯತ್ನಿಸುವಂತೆ ಉತ್ತೇಜಿಸಲು ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರು ತಮ್ಮ ,ತಮ್ಮ ಉಸ್ತುವಾರಿ ವಿಭಾಗಗಳಿಗೆ ಭೇಟಿ ನೀಡಿ ಸಿಹಿ ಹಂಚುವದರೊಂದಿಗೆ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
- Advertisement -
ಅತೀ ಹೆಚ್ಚಿನ ಸಾರಿಗೆ ಆದಾಯವನ್ನು ಸಂಗ್ರಹಿಸಲು ಕಾರಣಕರ್ತರಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ, ತಾಂತ್ರಿಕ ಸಿಬ್ಬಂದಿಗಳಿಗೆ, ಘಟಕ ವ್ಯವಸ್ಥಾಪಕರಿಗೆ, ವಿಭಾಗದ ಹಿರಿಯ ಅಧಿಕಾರಿಗಳಿಗೆ, ಎಲ್ಲ ಸಿಬ್ಬಂದಿಗಳಿಗೆ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ ಕೇಂದ್ರ ಕಛೇರಿಯ ಎಲ್ಲ ಇಲಾಖಾ ಮುಖ್ಯಸ್ಥರುಗಳಿಗೆ ವ್ಯವಸ್ಥಾಪಕ ನಿರ್ದೇಶಕರಾದ ಭರತ್.ಎಸ್ ಭಾ.ಆ.ಸೇ, ರವರು ಅಭಿನಂದನೆ ಸಲ್ಲಿಸಿದ್ದಾರೆ.
ಮುಂಬರುವ ದಿನಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆದಾಯ ವೃದ್ದಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ನಿಯಮಿತ ಹಾಗೂ ಗುಣಮಟ್ಟದ ಸಾರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.