ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ (Mudalgi) ತಾಲೂಕಿನ ಕಲ್ಲೋಳಿ (Kalloli) ಪಟ್ಟಣದಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಶಾಲೆ (Kendriya Vidyalaya School) ಯನ್ನು ತೆರೆದು ಕಾಲಮಿತಿಯಲ್ಲಿ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಸೌಲಭ್ಯ ದೊರೆಯುವಂತೆ ಅಗತ್ಯ ಪ್ರಸ್ತಾವನೆಗೆ ಸರಕಾರ ಮಂಜೂರಾತಿ ನೀಡುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ (Mp Iranna Kadadi) ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಮಂಗಳವಾರ (ಡಿ-20) ರಂದು ರಾಜ್ಯಸಭಾ ಸಂಸತ್ತಿನ ಚಳಿಗಾಲ ಅಧಿವೇಶನದ ವಿಶೇಷ ಉಲ್ಲೇಖದ ಮೂಲಕ ವಿಷಯ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ ಅವರು, ಬೆಳಗಾವಿ ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆ ಮತ್ತು ಎರಡನೇ ಉದ್ದೇಶಿತ ರಾಜಧಾನಿ ಆದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಷ್ಠಿತ ಸುವರ್ಣ ವಿಧಾನ ಸೌಧವು ಬೆಳಗಾವಿಯಲ್ಲಿದೆ, ಇಲ್ಲಿ ಪ್ರತಿ ವರ್ಷ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತದೆ. ಗೋಕಾಕ್ ಸಿಟಿ ಇಂಡಸ್ಟ್ರೀಸ್, ವ್ಯಾಪಾರ, ವೈದ್ಯಕೀಯ, ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಜನಪದ ಕಲೆಗಳಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿದೆ. ಈ ಭಾಗದಲ್ಲಿ ನಮ್ಮ ಗ್ರಾಮೀಣ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯವಿಲ್ಲ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನೂತನ ಕೇಂದ್ರೀಯ ವಿದ್ಯಾಲಯಕ್ಕೆ ಮಂಜೂರಾತಿ ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದ್ದರಿಂದ ಗ್ರಾಮೀಣ ಮಕ್ಕಳ ಶಿಕ್ಷಣದ ಶ್ರೇಯೋಭಿವೃದ್ಧಿಗಾಗಿ ನಮ್ಮ ಭಾಗದಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಬೇಕು ಅದಕ್ಕಾಗಿ ಜಿಲ್ಲಾಡಳಿತದಿಂದ ನಿಗದಿತ ಕೆವಿಎಸ್ ನಿಯಮಾವಳಿಯಂತೆ ಸೂಕ್ತ ಭೂಮಿ ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಎಂದರು.
- Advertisement -
ಈ ಕೇಂದ್ರೀಯ ವಿದ್ಯಾಲಯದ ವ್ಯಾಪ್ತಿಯಲ್ಲಿ ಮೂಡಲಗಿ, ಗೋಕಾಕ, ರಾಯಬಾಗ, ಯರಗಟ್ಟಿ, ಸವದತ್ತಿ, ಹುಕ್ಕೇರಿ ತಾಲೂಕುಗಳನ್ನು ಒಳಗೊಂಡಿದ್ದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಾವಲಂಬಿ ಮತ್ತು ಸಮರ್ಥ ಭಾರತದ ಗುರಿಯನ್ನು ಸಹ ಪೂರೈಸುತ್ತದೆ ಎಂದರಲ್ಲದೇ ಈ ಭಾಗದಲ್ಲಿ ವಿದ್ಯಾಲಯವು ಅತಿ ಅವಶ್ಯ ಇರುವುದರಿಂದ ಬೇಗ ಮಂಜೂರಾತಿ ನೀಡುವಂತೆ ವಿನಂತಿಸಿದರು.