ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ನೀಡುವುದಾಗಿದೆ. ಈ ಯೋಜನೆಯ ಯಶಸ್ಸಿಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುವರ್ಣ ವಿಧಾನ ಸೌಧದಲ್ಲಿ (ಆ.30) ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ 2 ದಿನಗಳ ಕಾರ್ಯಗಾರ ಮತ್ತು “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ” ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ”ಯನ್ನು ಕರ್ನಾಟಕ ರಾಜ್ಯದ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಯಾದ ಕೆ.ಎಚ್.ಪಿ.ಟಿ.ಯ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮವನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ 14 ಜಿಲ್ಲೆಗಳ (ವಿಜಯನಗರವೂ ಸೇರಿದಂತೆ) 110 ತಾಲೂಕುಗಳಲ್ಲಿ 2,816 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ಜಾರಿಯಾಗಲಿದೆ.
- Advertisement -
ಬಾಗಲಕೋಟೆ, ಬಳ್ಳಾರಿ, (ವಿಜಯನಗರ), ಬೆಳಗಾವಿ, ಗದಗ, ಚಾಮರಾಜನಗರ,ದಾವಣಗೆರೆ, ಕಲ್ಬುರ್ಗಿ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಪ್ರತಿ ಗ್ರಾಮ ಪಂಚಾಯತಿಗೆ 25,000 ಕಿಟ್ ಗಳನ್ನು ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕೋವಿಡ್ ಹಾಗೂ ಕ್ಷಯ ಮುಕ್ತ ಕರ್ನಾಟಕ :
ಕೋವಿಡ್ ಎದುರಿಸುವಲ್ಲಿ ಜಗತ್ತಿನಲ್ಲಿಯೇ ಭಾರತ ಮೊದಲ ಸ್ಥಾನ ಪಡೆದಿದೆ. ದೇಶದಲ್ಲೇ ಕರ್ನಾಟಕ ಕೋವಿಡ್ ನ್ನು ಯಶಸ್ವಿಯಾಗಿ ಎದುರಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ಈ ಕಾರ್ಯದಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮುಖ್ಯವಾಗಿದೆ.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ವಿವಿಧ ಇಲಾಖೆಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಶ್ರಮವಹಿಸಿ ಕೆಲಸ ನಿರ್ವಹಿಸಿದ್ದಾರೆ. ಪ್ರಾರಂಭದಲ್ಲಿ ಕೋವಿಡ್ ಲಸಿಕೆಯ ಕುರಿತಂತೆ ಜನರಲ್ಲಿ ಗೊಂದಲವಿತ್ತು. ಆದರೆ ಈಗ ಲಸಿಕಾಕರಣದಲ್ಲಿ ಭಾರತ ಯಶಸ್ವಿಯಾಗುತ್ತಿರುವುದು ಸಂತಸದ ವಿಷಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದರು
ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ಪೂರೈಕೆ:
ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವಲ್ಲಿ ದೇಶದಲ್ಲಿ ಕರ್ನಾಟಕ ಮೊದಲಿದ್ದು, ಜಲ ಜೀವನ್ ಮಿಷನ್ ಅಡಿಯಲ್ಲಿ (ಮನೆ ಮನೆಗೂ ಗಂಗೆ) 2 ವರ್ಷದಲ್ಲಿ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ.
ವಿಶೇಷವಾಗಿ ಸಮಗ್ರ ಕೆರೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ 28,000 ಸಾವಿರ ಕೆರೆಗಳ ಅಭಿವೃದ್ಧಿಗೆ ಪಣ ತೊಡಬೇಕು. ಶೌಚಾಲಯ ನಿರ್ಮಾಣ ಕುರಿತು ಇರುವ ಅಂಶಗಳ ಬಗ್ಗೆ ಗಮನ ಹರಿಸಬೇಕು. ಪ್ರಧಾನ ಮಂತ್ರಿಗಳು ನವೆಂಬರ್ ವರೆಗೆ ಎಲ್ಲರಿಗೂ ಉಚಿತ ಲಸಿಕೆ ಹಾಗೂ ಉಚಿತ ಪಡಿತರ ವಿತರಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಅವರು, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಆಹಾರ ಮಾನವನ ಮೂಲಭೂತ ಅವಶ್ಯಕತೆಗಳಾಗಿದ್ದು, ಅವುಗಳನ್ನು ಪೂರೈಸುವುದು ಪಂಚಾಯತ್ ನ ಮುಖ್ಯ ಕಾರ್ಯವಾಗಿದೆ.
ಕೋವಿಡ್ ತಡೆಗಟ್ಟುವಲ್ಲಿ ಪಂಚಾಯಿತಿ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ನ ಪಾತ್ರ ಬಹಳ ಪ್ರಮುಖವಾಗಿದೆ. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ
ಬಹುಕಾಲದ ಆರೋಗ್ಯಕ್ಕಾಗಿ “ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆ”ಯನ್ನು ಜಾರಿಗೆ ತರಲಾಗಿದ್ದು,ಮುಖ್ಯವಾಗಿ ಕೋವಿಡ್ ತಡೆಗಟ್ಟುವಲ್ಲಿ ಈ ಯೋಜನೆ ಪ್ರಯೋಜನಕಾರಿಯಾಗಲಿದೆ.
ಕೇವಲ ಕೋವಿಡ್ ಮಾತ್ರವಲ್ಲದೇ, ಡಯಾಬಿಟಿಸ್, ಬಿ.ಪಿ. ಮುಂತಾದ ರೋಗಗಳನ್ನು ಗುರುತಿಸಿ,ಅವುಗಳನ್ನು ತಡೆಗಟ್ಟಲು ಸಹಕಾರಿಯಾಗಲಿದೆ.
ಇದೇ ವೇಳೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆ.ಹೆಚ್.ಟಿ.ಪಿ.)ಯ ಮುಖ್ಯಸ್ಥರಾದ ಮೋಹನ್ ಹೆಚ್.ಎಮ್. ಮಾತನಾಡಿ, ಕೋವಿಡ್ ತಡೆಗಟ್ಟುವಲ್ಲಿ ಈ ಯೋಜನೆ ಸಹಕಾರಿಯಾಗಿದೆ. ಕ್ಷಯ ಮುಕ್ತ ಕರ್ನಾಟಕದ ನಿರ್ಮಾಣಕ್ಕೆ ಉಪಯೋಗಕಾರಿಯಾಗಿದೆ.
ಮುಖ್ಯವಾಗಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಒತ್ತು ನೀಡಲಿದೆ. ಈ ಯೋಜನೆಯಡಿ ನೀಡುವ ಕಿಟ್ ಆಕ್ಸಿಮೀಟರ್, ಸ್ರ್ಕೀನಿಂಗ್ ಸೇರಿದಂತೆ ಇತರ ಪರಿಕರಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಆಪ್ತ ಸಮಾಲೋಚನೆಗೆ “ಸಹಿತ” ಸಹಾಯವಾಣಿ :
ಈಗಾಗಲೇ, ಬೆಂಗಳೂರು, ಮೈಸೂರು, ಧಾರವಾಡ ಜಿಲ್ಲೆಗಳಲ್ಲಿ ಆಪ್ತ ಸಮಾಲೋಚನೆಯ ಕೇಂದ್ರಗಳನ್ನು ತೆರೆಯಲಾಗಿದೆ. ಆರೋಗ್ಯ ತಪಾಸಣೆಯ 8 ಮಹತ್ವದ ಉಪಕರಣಗಳನ್ನು ಒಳಗೊಂಡ ಪಂಚಾಯತ್ ಕಿಟ್, ಕೊವಿಡ್ ಸೋಂಕು ಖಾತ್ರಿಯಾದವರ ಪ್ರತ್ಯೇಕ ವಾಸದ ಆರೈಕೆಗಾಗಿ ಕೊವಿಡ್ ಕಿಟ್, ಸೋಂಕಿತರ, ಸೋಂಕಿನಿಂದ ನೊಂದವರ, ಸಾವಿಗೀಡಾದವರ ಕುಟುಂಬದ ಆಪ್ತ ಸಮಾಲೋಚನೆಯೂ ಸೇರಿದಂತೆ “ಸಹಿತ” ಸಹಾಯವಾಣಿಯಲ್ಲಿ ಸಾಂತ್ವನ ಸೇವೆ ದೊರೆಯಲಿದೆ ಎಂದು ಅವರು ತಿಳಿಸಿದರು.
ಕಾರ್ಯಪಡೆಯ ಆಂದೋಲನಕ್ಕೆ ಮಾಹಿತಿ, ಶಿಕ್ಷಣ, ಸಂವಹನದ ಐ.ಇ.ಸಿ ಕಿಟ್ ಲಭ್ಯವಿದೆ. ಇದರಲ್ಲಿ ಕೋವಿಡ್ ಸೋಂಕು ಹರಡದಂತಿರಲು ಬೇಕಾದ ಸರಿಯಾದ ನಡವಳಿಕೆ, ಸೋಂಕು ರೋಗಗಳಿಂದ ಬಳಲುತ್ತಿರುವವರ ಮತ್ತು ಅವರ ಕುಟುಂಬದ ಬಗ್ಗೆ ಇರುವ ಕಳಂಕ ಕಡಿಮೆ ಮಾಡುವ ಬಗ್ಗೆ ಅರಿವು ಜಾಗೃತಿ ಮೂಡಿಸುವ ಸಂದೇಶಗಳಿವೆ.
ಗ್ರಾಮ ಸಮಾಜದ ಪ್ರಾಥಮಿಕ ಹಂತದ ಆರೋಗ್ಯ ನಿಗಾವಣೆಗೆ ಪಂಚಾಯತ್ ಕಿಟ್ ಸಹಕಾರಿಯಾಗಲಿದೆ. ಆರೋಗ್ಯ ಇಲಾಖೆಯ ಉಪಕೇಂದ್ರಗಳು ಮತ್ತು ಆರೋಗ್ಯ ಮತ್ತು ಕ್ಷೇಮಕೇಂದ್ರಗಳು ಆರೋಗ್ಯ ಕಾರ್ಯಪಡೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ ಎಂದು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆ.ಹೆಚ್.ಟಿ.ಪಿ.)ಯ ಮುಖ್ಯಸ್ಥರಾದ ಮೋಹನ್ ಹೆಚ್.ಎಮ್. ತಿಳಿಸಿದರು.
ಈ ಸಂದರ್ಭದಲ್ಲಿ , ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಯೋಜನೆಯ ಕಿಟ್ ನ್ನು ಸಾಂಕೇತಿಕವಾಗಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಅವರ ಕಾರ್ಯಪಡೆಗಳಿಗೆ ವಿತರಿಸಲಾಯಿತು.
ಇದೇ ವೇಳೆ, ನರೇಗಾ ಕುರಿತಂತೆ ಸಹಾಯವಾಣಿ ಸಂಖ್ಯೆ 1800-425-2822 ನ್ನು ಬಿಡುಗಡೆಗೊಳಿಸಲಾಯಿತು. ಹೊಸ ಕೆರೆಗಳ ನಿರ್ಮಾಣದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೇ, ನರೇಗಾ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಕ್ಯಾಪ್ ಮತ್ತು ಶರ್ಟ್ ಒದಗಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಭಿಯಂತರರು,ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.