ನರೇಗಾ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಮೊದಲ ‌‌ಸ್ಥಾನ – ಕೆ ಎಸ್ ಈಶ್ವರಪ್ಪ
COVID-19 Latest News

ನರೇಗಾ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಮೊದಲ ‌‌ಸ್ಥಾನ – ಕೆ ಎಸ್ ಈಶ್ವರಪ್ಪ

Ishwarappa

ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಮ್ಮ ಗ್ರಾಮಗಳನ್ನು ಕುಟುಂಬದಂತೆ ಭಾವಿಸಿ, ಅವುಗಳ ಸಕಲ ಅಭಿವೃದ್ಧಿಗಾಗಿ ಶ್ರಮಿಸಬೇಕು. ಗ್ರಾಮ ಪಂಚಾಯತ ಚುನಾವಣೆಯಲ್ಲಿ ಜಯ ಗಳಿಸಿರುವ ಅಧ್ಯಕ್ಷರು ತಮ್ಮನ್ನು ಗೆಲ್ಲಿಸಿರುವ ಜನರು ಸಂತೃಪ್ತಿಯಿಂದ ಜೀವನ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಬೆಳಗಾವಿಯ ಗಾಂಧಿ ಭವನದಲ್ಲಿ ಬುಧವಾರ (ಆ.11) 75 ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅನಕ್ಷರಸ್ಥರಿಗೂ ಸಹ ಅವಕಾಶವನ್ನು ಕಲ್ಪಿಸಲಾಗುತ್ತಿದ್ದು, ಅವರು ಗ್ರಾಮಗಳ ಸಕಲ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೂ ದೂರದೃಷ್ಟಿ ಕೋನದಿಂದ ಯೋಜನೆಗಳನ್ನು ರೂಪಿಸಬೇಕು.

Also read : Cm Basavaraj Bommai to visit districts bordering Maharashtra and Kerala

ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ. ಇಲ್ಲಿ ಜನರ ನಂಬಿಕೆ‌ ಬಹಳ ಮುಖ್ಯ. 5 ವರ್ಷದ ಅಧಿಕಾರದ ಅವಧಿಯಲ್ಲಿ ಅರ್ಧ ದಿನವಾದರೂ ಕೆಲಸ ಮಾಡಬೇಕು.ಜನರ ಸಮಸ್ಯೆಗಳನ್ನು ಆಲಿಸಬೇಕು.
ಜಯ ಗಳಿಸಿದ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ,‌ಅಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ,ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ನರೇಗಾ ಯೋಜನೆಯಿಂದ ಉದ್ಯೋಗ ಸೃಷ್ಟಿ :

ನರೇಗಾ ಯೋಜನೆಯ ಮುಖಾಂತರ ಗ್ರಾಮಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಿ, ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಅವರನ್ನು ತೊಡಗಿಸಬೇಕು. ವಲಸೆ ಬಂದಂತಹ ಜನರಿಗೂ ಸಹ ಅವಕಾಶ ಕಲ್ಪಿಸಿ,ಸ್ವಾವಲಂಬಿ ಜೀವನ ನಡೆಸುವಲ್ಲಿ ನರೇಗಾ ಯೋಜನೆ ಸಹಕಾರಿಯಾಗಿದೆ.

ವಿಶೇಷವಾಗಿ, ಮಳೆ‌ ನೀರಿನ ಸಂಗ್ರಹ ಮಾಡಲು ಕ್ಯಾಚ್ ದಿ ರೇನ್ ಈ ಯೋಜನೆಯಲ್ಲಿ ಬದು, ಕೃಷಿ ಹೊಂಡಗಳ ನಿರ್ಮಾಣ,ಕೆರೆಗಳ‌‌ ಅಭಿವೃದ್ಧಿ, ತೆರೆದ ಬಾವಿಗಳ‌ ನಿರ್ಮಾಣ ಮಾಡುವುದರೊಂದಿಗೆ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. ಭೂಮಿಯಲ್ಲಿ ಇಂಗಿಸಿ,ಬಳಸಬೇಕು.

ಕರ್ನಾಟಕದಲ್ಲಿ 28,000 ಕ್ಕೂ ಹೆಚ್ಚು ಕೆರೆಗಳಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಗುರಿಯನ್ನು ತಲುಪಲಾಗುವುದು ಎಂದು ಅವರು ಭರವಸೆ ನೀಡಿದರು.

ನರೇಗಾ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ಮೊದಲ ‌‌ಸ್ಥಾನ :

ಕೋವಿಡ್ 2 ನೇಯ ಅಲೆಯ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿದ್ದು, ಗ್ರಾಮ ಪಂಚಾಯತಿ ವಲಯದ ಟಾಸ್ಕ್ ಫೋರ್ಸ್ ಸೋಂಕನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ನಿರ್ವಹಿಸುವಲ್ಲಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಜಗತ್ತಿನಲ್ಲಿಯೇ ನಮ್ಮ ದೇಶ ಮೊದಲ‌ ಸ್ಥಾನದಲ್ಲಿದೆ.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಲ್ಲಿ ಒಟ್ಟು 4,87,695 ಕಾಮಗಾರಿಗಳನ್ನು ರಾಜ್ಯವು ಕೈಗೊಂಡಿದ್ದು, ಕರ್ನಾಟಕ ರಾಜ್ಯಕ್ಕೆ ಮೊದಲ‌ ಸ್ಥಾನ ದೊರಕಿದೆ.

ತೋಟಗಾರಿಕೆಯಲ್ಲಿಯೂ ಸಹ ಅನೇಕ‌ ರೀತಿಯ ಹೂವು, ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ತಮ್ಮ ಗ್ರಾಮಗಳ ಅಭಿವೃದ್ಧಿಯನ್ನು ಇತರ ಗ್ರಾಮಗಳ ಅಭಿವೃದ್ಧಿ ಯೊಂದಿಗೆ ಹೋಲಿಸಿ, ಸ್ಪರ್ಧಾತ್ಮಕ ಭಾವನೆಯಿಂದ ಗ್ರಾಮ ಪಂಚಾಯಿತಿ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply