ಕೋವಿಡ್ ಹಿನ್ನೆಲೆಯಲ್ಲಿ ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಸೋಮವಾರ (ನ.೧) ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರೂ ಅಗಿರುವ ಜಲಸಂಪನ್ಮೂಲ (ಬೃಹತ್ ಮತ್ತು ಮಧ್ಯಮ) ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ರಾಷ್ಟ್ರಧ್ವಜಾರೊಃಣ ನೆರವೇರಿಸಿದರು.
ತಾಯಿ ಭುವನೇಶ್ವರಿದೇವಿಗೆ ಪೂಜೆ ಸಲ್ಲಿಸಿ ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ಬಳಿಕ ಸಂದೇಶವನ್ನು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೋವಿಡ್ ನಂತರ ಎದುರಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ಮಧ್ಯೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರು, ರೈತರು, ಕೂಲಿಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಡುವ ದೃಢಸಂಕಲ್ಪ ಮಾಡಿದೆ ಎಂದು ಹೇಳಿದರು.
ಕನ್ನಡ ಹೋರಾಟಗಾರರು-ಪತ್ರಕರ್ತರಿಗೆ ಸನ್ಮಾನ: ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ಹೋರಾಟಗಾರರು-ಪತ್ರಕರ್ತರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
- Advertisement -
ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಪದ್ಮರಾಜ ವೈಜನ್ನವರ, ತಿಪ್ಪೇಸ್ವಾಮಿ, ಗಣೇಶ ರೋಖಡೆ, ಬಾಳು ಉದಗಟ್ಟಿ ಹಾಗೂ ಶಿವನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರಾದ ಕನ್ನಡಪ್ರಭ ಹಿರಿಯ ವರದಿಗಾರ ಶ್ರೀಶೈಲ ಮಠದ, ನ್ಯೂಸ್ ಫರ್ಸ್ಟ್ ವರದಿಗಾರ ಶ್ರೀಕಾಂತ ಕುಬಕಡ್ಡಿ, ಹಳ್ಳಿಯ ಸಂದೇಶ ಪತ್ರಿಕೆ ಸಂಪಾದಕ ಕುಂತಿನಾಥ ಕಲಮನಿ, ಇನ್-ಬೆಳಗಾವಿ ನ್ಯೂಸ್ ಸಂಪಾದಕ ರಾಜಶೇಖರ ಪಾಟೀಲ, ಸಂಯುಕ್ತ ಕರ್ನಾಟಕ ಹಿರಿಯ ವರದಿಗಾರ ವಿಲಾಸ್ ಜೋಶಿ, ಕೆ.ಎಲ್.ಇ. ವೇಣುಧ್ವನಿಯ ಸುನೀತಾ ದೇಸಾಯಿ ಹಾಗೂ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸನ್ಮಾನಿಸಿ, ಗೌರವಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಯಾದವೇಂದ್ರ ಪೂಜಾರಿ(ಸಂಗೀತ), ಹೊಳೆಪ್ಪ ನೇಸರಗಿ(ಶೌರ್ಯ), ಬ್ರಹ್ಮಾನಂದ ಬಸರಗಿ(ಚಿತ್ರಕಲೆ), ಫಿರೋಜ್ ಗುಲಾಬ್ ಚಾಹುಸ್(ಪರಿಸರ), ಮಲಪ್ರಭಾ ಜಾಧವ್ (ಕ್ರೀಡೆ), ಚೆನ್ನಬಸಯ್ಯ ಕಠಾಪುರಿಮಠ(ಸಮಾಜ ಸೇವೆ), ಡಾ.ರಾಮಕೃಷ್ಣ ಮರಾಠೆ(ಸಾಹಿತ್ಯ), ಶಿವಲಿಂಗ ಕರವಿನಕೊಪ್ಪ(ಬಯಲಾಟ), ಆಶಾ ಕಡಪಟ್ಟಿ(ಸಾಹಿತಿ), ಸುನೀಲ್ ನೇಗಿನಹಾಳ(ಸಮಾಜ ಸೇವೆ), ಕಿರಣ ಮಾಳನ್ನವರ(ಸಾಮಾಜಿಕ ಜಾಲತಾಣ) ಹಾಗೂ ನಾಗರಾಜ ಮುರಗೋಡ(ಸಾಹಿತ್ಯ) ಅವರನ್ನು ಸನ್ಮಾನಿಸಲಾಯಿತು.
ಸಂಸದರಾದ ಮಂಗಲ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಉತ್ತರ ವಕಯ ಐಜಿಪಿ ಎನ್.ಸತೀಶಕುಮಾರ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿಇಒ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಚಿವ ಗೋವಿಂದ ಕಾರಜೋಳ ಅವರ ರಾಜ್ಯೋತ್ಸವ ಸಂದೇಶ: ಬೆಳಗಾವಿ ಜಿಲ್ಲೆಯ ಮಹಾಜನಗಳೇ,
ಎಲ್ಲರಿಗೂ 66ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ರಾಜ್ಯೋತ್ಸವದ ಇಂದಿನ ಸಂಭ್ರಮದಲ್ಲಿ ಭಾಗಿಯಾಗಿರುವ ನಾಡಿನ ಹಿರಿಯ ಜೀವಿಗಳಿಗೆ, ಏಕೀಕರಣಕ್ಕೆ ದುಡಿದ ಮಹನೀಯರಿಗೆ, ವಿದ್ವಾಂಸರು, ಕವಿ-ಸಾಹಿತಿಗಳಿಗೆ, ಚಿಂತಕರು, ಜಿಲ್ಲೆಯ ಶಾಸಕ ಮಿತ್ರರು, ಸಂಸದರು, ಹಾಗೂ ಎಲ್ಲ ಜನಪ್ರತಿನಿಧಿಗಳು, ನಾಗರಿಕ ಬಂಧುಗಳು, ಸಹೋದರ-ಸಹೋದರಿಯರು ಮತ್ತು ಮಾಧ್ಯಮದ ಸ್ನೇಹಿತರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಬೆಳಗಾವಿ ಜಿಲ್ಲೆ ಅಥಣಿಯ ಸಮಾಜಸೇವಕ ಶ್ರೀ ಬಿ.ಎಲ್.ಪಾಟೀಲ ಅವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಇತಿಹಾಸದಲ್ಲಿ “ವೇಣುಗ್ರಾಮ”ವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿ ಸ್ಥಳೀಯವಾಗಿ ಲಭ್ಯವಿರುವ ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ. 6ನೇ ಶತಮಾನದಿಂದ ಕ್ರಿ.ಶ 760ರ ವರೆಗೂ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ 875ರ ಅವಧಿಯಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಾಂಸ್ಕøತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು.
ದೆಹಲಿಯ ಸುಲ್ತಾನರ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಬೆಳಗಾವಿ, ಕ್ರಿ.ಶ 1347ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿದ್ದ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂಬುದು ಸರ್ವವಿದಿತ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿವೇಶನವು 1924ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ನಡೆದಿತ್ತು ಎಂಬುದು ಬೆಳಗಾವಿಯ ಹಿರಿಮೆ. ಅದೇ ರೀತಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರು. 1950ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ 1956ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.
ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ. ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 65 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 66ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ.