ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅನುದಾನ ನೀಡುವುದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಕ್ಟೋಬರ್ ಮೊದಲ ವಾರದ ವೇಳೆಗೆ ಎಲ್ಲ ಪೂರ್ವಸಿದ್ಧತೆ ಕೈಗೊಂಡು ನಂತರ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಜಲಜೀವನ ಮಿಷನ್ ಮೂಲಕ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 8.52 ಲಕ್ಷ ಮನೆಗಳಿಗೆ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲುಕೇಂದ್ರ ಸರಕಾರ 2100 ಕೋಟಿ ಮಂಜೂರು ಮಾಡಿದೆ. 918 ಜನವಸತಿಗಳಿಗೆ ನೂರಕ್ಕೆ ನೂರರಷ್ಟು ನೀರು ಡಿಪಿಆರ್ ಆಗಿದೆ ಅಕ್ಟೋಬರ್ ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ಜಿಲ್ಲೆಗೆ ದೊಡ್ಡ ಪ್ರಮಾಣದ ಅನುದಾನ ಮುಂದಿನ ವರ್ಷದಲ್ಲಿ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಹೊಸ ಕೊಳವೆಬಾವಿ ಕೊರೆಯುವ ಬದಲು ಇರುವ ಕೊಳವೆಬಾವಿಗಳ ದುರಸ್ತಿ, ಮರುಪೂರಣಕ್ಕೆ ಆದ್ಯತೆ ನೀಡಬೇಕು. ನದಿಗಳ ಮೇಲ್ಮಟ್ಟದ ನೀರು ಬಳಕೆ ಮಾಡಿಕೊಂಡು ಜಲಜೀವನ ಮಿಷನ್ ಯೋಜನೆ ಮೂಲಕ ಎಲ್ಲ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
- Advertisement -
ಕುಡಿಯುವ ನೀರು ಯೋಜನೆ ಅನುಷ್ಠಾನದ ಬಳಿಕ ವಿದ್ಯುತ್ ಬಿಲ್ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸಪ್ರೆಸ್ ಫೀಡರ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
1.91 ಲಕ್ಷ ಮನೆಗಳಿಗೆ ನಳದ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಮನೆಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಓ ದರ್ಶನ್ ತಿಳಿಸಿದರು.
ಜಿಲ್ಲೆಗೆ ಜಲಜೀವನ ಮಿಷನ್ ಯೋಜನೆಗೆ ಒಟ್ಟಾರೆ 2100 ಕೋಟಿ ರೂಪಾಯಿ ಮಂಜೂರಾಗಿದೆ. ಇದುವರೆಗೆ 147 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 106 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ. ಆದ್ದರಿಂದ ಬೀಜ-ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.