ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಚೇರಿ ಬೆಳಗಾವಿಗೆ

`ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ’ ಎಂದು ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ತಿಳಿಸಿದರು.

`ನಗರದ ಕೃಷ್ಣದೇವರಾಯ ವೃತ್ತ ಸಮೀಪದ “ವಿಶ್ವಗುರು ಕಾಂಪ್ಲೆಕ್ಸ್’ನ 4ನೇ ಮಹಡಿಯಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಾಗಿದೆ. ಅಧಿಕೃತ ಉದ್ಘಾಟನಾ ಸಮಾರಂಭವನ್ನು ನ.20ರಂದು ಸಂಜೆ 4ಕ್ಕೆ ಹಮ್ಮಿಕೊಳ್ಳ ಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

“ಬಸವಪರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಶಿವಮೊಗ್ಗ ಆನಂದಪುರಂ ಮುರುಘಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ 110 ಮಠಾಧೀಶರಿಗೆ ಆಹ್ವಾನ ನೀಡಿದ್ದೇವೆ’ ಎಂದು ಹೇಳಿದರು.

21ರಂದು ಸಾಮಾನ್ಯ ಸಭೆ: ‘ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಯಾಗಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ, ಉಪಾಧ್ಯಕ್ಷ ಅರವಿಂದ ಜತ್ತಿ, ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ಮುಖಂಡರಾದ ಎ.ಬಿ. ಪಾಟೀಲ, ಪ್ರಕಾಶ ಹುಕ್ಕೇರಿ, ಬಸವರಾಜ ಬುಳ್ಳ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನ.21ರಂದು ಬೆಳಿಗ್ಗೆ 11ಕ್ಕೆ 3ನೇ ಸರ್ವ ಸಾಮಾನ್ಯ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

“ಲಿಂಗಾಯತ ಸಮಾಜದವರು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅನುಕೂಲ ಆಗಲೆಂದು ಇಲ್ಲಿಗೆ ಕೇಂದ್ರ ಕಚೇರಿ ಸ್ಥಳಾಂತರಿಸಿದ್ದೇವೆ. ಮಹಾರಾಷ್ಟ್ರಕ್ಕೆ ಸಮೀಪದಲ್ಲಿರುವುದು ಕೂಡ ಮತ್ತೊಂದು ಕಾರಣವಾಗಿದೆ. ಆ ರಾಜ್ಯದ 6 ಜಿಲ್ಲೆಗಳಲ್ಲಿ ಮಹಾಸಭಾದ ಘಟಕಗಳು ಆರಂಭವಾಗಿವೆ. ನಾಗನೂರು ರುದ್ರಾಕ್ಷಿ ಮಠದವರು ಕಟ್ಟಡವನ್ನು ಉಚಿತವಾಗಿ ನೀಡಿದ್ದಾರೆ. ಒಳಾಂಗಣ ವಿನ್ಯಾಸ ಸೇರಿದಂತೆ ಎಲ್ಲವನ್ನೂ ಮಠದವರೆ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

Leave a Reply