ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಶ್ರೀ ಗಣೇಶೋತ್ಸವ-2021 ರ ನಿಮಿತ್ಯ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಇರುವ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಇಂದು (ಶುಕ್ರವಾರ) ಆದೇಶ ಹೊರಡಿಸಿರುತ್ತಾರೆ.
ಉಲ್ಲೇಖ:- 1) ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಬೆಂಗಳೂರು ರವರ ಆದೇಶ ಸಂಖ್ಯೆ: ಕಂಇ 158 ಟಿಎನ್ಆರ್ 2020, ದಿನಾಂಕ: 18.07.2021
2) ವಿಪತ್ತು ನಿರ್ವಹಣಾ ಕಾಯ್ದೆ – 2005,
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿವರ್ಷವೂ ಶ್ರೀ ಗಣೇಶೋತ್ಸವವನ್ನು ಅತೀ ವಿಜೃಂಭಣೆಯಿಂದ ಪಾರಂಪರಿಕವಾಗಿ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಶ್ರೀ ಗಣೇಶೋತ್ಸವವನ್ನು ದಿನಾಂಕ: 10.09.2021 ರಿಂದ ಆಚರಿಸಬೇಕಾಗಿರುತ್ತದೆ. ಆದರೆ ಕೋವಿಡ್-19 ಡೆಲ್ಟಾ ಪ್ಲಸ್ ವೈರಾಣುವಿನ ಹರಡುವಿಕೆಯು ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ತೀವ್ರತರವಾಗಿ ಹರಡುತ್ತಿರುವುದರಿಂದ, ಬೆಳಗಾವಿ ನಗರದಲ್ಲಿ ಮತ್ತು ಗಡಿರಾಜ್ಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಚಿಕ್ಕೋಡಿ ತಾಲೂಕಿನಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಸಂಭಾವ್ಯ ಕೋವಿಡ್-19 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಬೆಂಗಳೂರು ರವರು ಹೊರಡಿಸಿದ ಆದೇಶದಲ್ಲಿ ಸೂಚಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತೀ ಅವಶ್ಯವಿರುತ್ತದೆ. ಆದ್ದರಿಂದ ಕೋವಿಡ್-19 ಸೋಂಕು ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-19 ಸೋಂಕು ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಶ್ರೀ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸುವುದು ಸೂಕ್ತವೆಂದು ಮನವರಿಕೆಯಾಗಿರುವುದರಿಂದ ಈ ಕೆಳಗಿನಂತೆ ಆದೇಶಿಸಿದೆ.
ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಕಾರಣಗಳಿಂದ, ಎಂ.ಜಿ.ಹಿರೇಮಠ, ಭಾ.ಆ.ಸೇ. ಜಿಲ್ಲಾಧಿಕಾರಿ ಮತ್ತು ಜಿಲ್ಲಾದಂಡಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ, ಬೆಳಗಾವಿ ಜಿಲ್ಲೆ, ಬೆಳಗಾವಿ ಆದ ನಾನು ವಿಪತ್ತು ನಿರ್ವಹಣಾ ಕಾಯ್ದೆ, 2005 ರಡಿ ನನ್ನಲ್ಲಿರುವ ಪ್ರದತ್ತವಾದ ಅಧಿಕಾರದ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-19 ಸೋಂಕು ನಿಂದಾಗಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ವರ್ಷದ ಶ್ರೀ ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸದೇ ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಸಮೀಪದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಮನೆಯ ಶ್ರೀ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತಿಷ್ಠಾಪಿಸಿ ಆಚರಿಸಲು ಕೆಳಗಿನಂತೆ ಸಾರ್ವಜನಿಕರು, ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಈ ಕೆಳಕಂಡ ಎಲ್ಲ ಮಾರ್ಗಸೂಚಿಗಳನ್ನು ಪರಿಪಾಲಿಸುವ ನಿಬಂಧನೆಗೊಳಪಟ್ಟು ಈ ಮೂಲಕ ಆದೇಶಿಸಿರುತ್ತಾರೆ.
- Advertisement -
1) ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಗಣೇಶ ಉತ್ಸವ ಆಚರಿಸಲು ಪೊಲೀಸ್/ ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆ/ಹೆಸ್ಕಾಂ/ಆರೋಗ್ಯ/ಅಗ್ನಿಶಾಮಕ/ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.
- Advertisement -
2) ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗಿರುವುದರಿಂದ ಪೊಲೀಸ್ ಮಹಾನಗರ ಪಾಲಿಕೆ/ ಸ್ಥಳೀಯ ಸಂಸ್ಥೆ/ಹೆಸ್ಕಾಂ/ಆರೋಗ್ಯ/ಅಗ್ನಿಶಾಮಕ/ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಯವರು ನೀಡುವ ಸೂಚನೆ/ನಿರ್ದೇಶನಗಳನ್ವಯ ಸೂಕ್ಷ್ಮ ನಿಯಂತ್ರಿತ ವಲಯಗಳ (Micro Containment Zones) ಹೊರಗೆ ಇರುವ ದೇವಸ್ಥಾನಗಳಲ್ಲಿ ಈ ವರ್ಷದ ಸಾರ್ವಜನಿಕ ಗಣೇಶ ಉತ್ಸವವನ್ನು ಯಾವುದೇ ರೀತಿಯ ಡಾಲ್ಟಿ ಉಪಯೋಗಿಸದೇ, ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸದೇ ಮತ್ತು ಬಣ್ಣಗಳನ್ನು ಎರಚದ ಅತೀ ಸರಳವಾಗಿ ಆಚರಿಸತಕ್ಕದ್ದು.
3) ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯ ಎತ್ತರ ಗರಿಷ್ಠ 2 ಅಡಿ (ಪೀಠ ಸಹಿತ) ಮೀರದಂತೆ ಹಾಗೂ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರ ಗರಿಷ್ಠ 4 ಅಡಿ (ಪೀಠ ಸಹಿತ) ಮೀರತಕ್ಕದ್ದಲ್ಲ ಹಾಗೂ ಕಡ್ಡಾಯವಾಗಿ ಪಿಓಪಿ ಬಳಸದೇ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು.
4) ಅದೇ ರೀತಿ ಮನೆಯಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಣೇಶ ಮೂರ್ತಿಯನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಲು ಎಲ್ಲ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು, ಒಂದು ವೇಳೆ ಈ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆಗದೇ ಇದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ಬೆಳಗಾವಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ತಯಾರಿಸಿದ ಮೊಬೈಲ್ ಟ್ಯಾಂಕಗಳಲ್ಲಿ ವಿಸರ್ಜನೆಯನ್ನು ನೆರವೇರಿಸತಕ್ಕದ್ದು.
- Advertisement -
5) ಶ್ರೀ ಗಣೇಶೋತ್ಸವ ಕಾಲಕ್ಕೆ ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ದೇವಸ್ಥಾನಗಳಲ್ಲಿ ಜಾಹೀರಾತು ಪ್ರದರ್ಶನಗಳ ಕಾರಣಗಳಿಂದ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು. ಕೋವಿಡ್-19 ಸಾಂಕ್ರಾಮಿಕ ರೋಗ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ, ಆರೋಗ್ಯ, ಸಂದೇಶಗಳನ್ನು ಬಿಂಬಿಸುವ ಜಾಹೀರಾತುಗಳಿಗೆ ಪ್ರಾಧಾನ್ಯತೆಯನ್ನು ನೀಡತಕ್ಕದ್ದು.
6) ಸಾಂಸ್ಕೃತಿಕ/ಮನರಂಜನಾ/ಭಜನೆ/ಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಬದಲಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೊರೋನಾ, ಮಲೇರಿಯಾ, ಡೆಂಗ್ಯೂ ಇತ್ಯಾದಿ ರೋಗಗಳನ್ನು ತಡೆಗಟ್ಟಲು ಆಧ್ಯತೆ ನೀಡಬೇಕು ಹಾಗೂ ಸಾರ್ವಜನಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವದು ಮತ್ತು ಧ್ವನಿವರ್ಧಕದಿಂದ ಶಬ್ದ ಮಾಲಿನ್ಯ ಉಂಟಾಗದಂತೆ ಮಾನ್ಯ ಸರ್ಕಾರದ ನಿಯಮಗಳನ್ನು ಪಾಲಿಸುವುದು.
7) ಶ್ರೀ ಗಣೇಶೋತ್ಸವ ಆಚರಣೆ ಕಾಲಕ್ಕೆ ಆರತಿ ಸಮಯದಲ್ಲಿ ಗರಿಷ್ಠ 05 ಜನ ಸೇರತಕ್ಕದ್ದು.
8) ಸಾರ್ವಜನಿಕರಿಗೆ ಶ್ರೀ ಗಣೇಶನ ದರ್ಶನದ ಸೌಲಭ್ಯವನ್ನು ಕೇಬಲ್ ನೆಟ್ವರ್ಕ್, ವೆಬ್ಸೈಟ್, ಫೇಸ್ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಆನ್ಲೈನ್ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆಯನ್ನು ಮಾಡತಕ್ಕದ್ದು.
9) ಶ್ರೀ ಗಣೇಶ ಮುರ್ತಿಯನ್ನು ಪ್ರತಿಷ್ಠಾಪಿಸಿದ ದೇವಸ್ಥಾನಗಳಲ್ಲಿ ದೇವಸ್ಥಾನದ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ದಿನನಿತ್ಯ ಸ್ಯಾನಿಟೈಜೇಷನ್ ಮಾಡುವುದು ಹಾಗೂ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಟೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಪಾಲನೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು, ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸುವಂತೆ ನೋಡಿಕೊಳ್ಳತಕ್ಕದ್ದು ಹಾಗೂ ದೇವಸ್ಥಾನದ ಮಂಡಳಿಗಳ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳ ಸದಸ್ಯರು/ಅರ್ಚಕರು ಕಡ್ಡಾಯವಾಗಿ ಕೋವಿಡ್-19 ಲಸಿಕೆಯನ್ನು ಪಡೆದಿರತಕ್ಕದ್ದು.
10) ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜನೆಯ ಕಾಲಕ್ಕೆ ಯಾವುದೇ ರೀತಿಯ ಮೆರವಣಿಗೆಯನ್ನು ಮಾಡಬಾರದು. ಶ್ರೀ ಗಣೇಶ ವಿರ್ಸಜನೆಯ ಸ್ಥಳದಲ್ಲಿ ಆರತಿ ಬೆಳಗುವ ಪೂಜಾ ವಿಧಿವಿಧಾನವನ್ನು ಮನೆ ಹಾಗೂ ದೇವಸ್ಥಾನಗಳಲ್ಲಿಯೇ ನೆರವೇರಿಸತಕ್ಕದ್ದು, ಶ್ರೀ ಗಣೇಶ ವಿಸರ್ಜನೆಯ ಸ್ಥಳದಲ್ಲಿ ಅಗತ್ಯ ಸಮಯದವರೆಗೆ ಮಾತ್ರ ಇದ್ದು, ಹೆಚ್ಚಿನ ವೇಳೆ ಆ ಸ್ಥಳದಲ್ಲಿ ನಿಲ್ಲಬಾರದು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚಿಕ್ಕ ಮಕ್ಕಳು, ಗರ್ಭಿಣಿ ಸ್ತ್ರೀಯರು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯದಿಂದ/Comorbid ಗಳಿಂದ ಬಳಲುತ್ತಿರುವವರು ಶ್ರೀ ಗಣೇಶ ಪ್ರತಿಷ್ಠಾಪನೆ/ ವಿಸರ್ಜನೆಯ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳುವುದು. ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಏಕಕಾಲಕ್ಕೆ ಮಾಡದೇ ಪೊಲೀಸ್ ಇಲಾಖೆಯು ನಿಗದಿಪಡಿಸಿದ ಮಾರ್ಗಸ್ಥಳ/ಸಮಯಕ್ಕೆ ಸರಿಯಾಗಿ ವಿಸರ್ಜನೆಯನ್ನು ಮಾಡತಕ್ಕದ್ದು.
11) ದೇವಸ್ಥಾನಗಳ ಮಂಡಳಿಗಳು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಗಳು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಕಡ್ಡಾಯವಾಗಿ ಪೊಲೀಸ್ ಇಲಾಖೆಯು ನಿಗದಿಪಡಿಸಿದ ಮಾರ್ಗಗಳನ್ನು ಬಳಸಿಕೊಂಡು ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್ಗಳಲ್ಲಿ ಹಾಗೂ ಜಿಲ್ಲೆಯ ಇನ್ನುಳಿದ ಸ್ಥಳಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ/ಸ್ಥಳೀಯ ಸಂಸ್ಥೆಗಳ ವತಿಯಿಂದ ಪೂರೈಸಲಾದ ಮೊಬೈಲ್ ಟ್ಯಾಂಕ್ಗಳನ್ನು ಬಳಸಿಕೊಂಡು ಶ್ರೀ ಗಣೇಶ ವಿಸರ್ಜನೆಯ ಕಾರ್ಯವನ್ನು ನೆರವೇರಿಸತಕ್ಕದ್ದು.
12) ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ, ಜಿಲ್ಲಾಡಳಿತ, ಪೋಲಿಸ್, ಮಹಾನಗರ ಪಾಲಿಕೆ, ಆರೋಗ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
13) ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಬೆಂಗಳೂರು ರವರ ಆದೇಶ ದಿನಾಂಕ: 18.07.2021 ರಡಿ ನೀಡಲಾಗಿರುವ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸತಕ್ಕದ್ದು.
ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.