ರಾಜ್ಯಮಟ್ಟದ ಉತ್ಸವವಾಗಲಿದೆ ಕಿತ್ತೂರು ಉತ್ಸವ : ಸಿಎಂ ಭರವಸೆ

ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಲವು‌ ವರ್ಷಗಳ‌ ಹಿಂದೆ ವೀರಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವೇದಿಕೆಯ ಮೂಲಕವೇ ಅಧಿಕಾರಿಗಳಿಗೆ ಆದೇಶವನ್ನು ನೀಡಿದರು. ಕಿತ್ತೂರು ‌ಉತ್ಸವದ ಆರಂಭಿಕ‌ ದಿನಗಳನ್ನು ಮೆಲುಕು ಹಾಕಿದ‌ ಮುಖ್ಯಮಂತ್ರಿಗಳು, ಇತ್ತೀಚಿನ ದಿನಗಳಲ್ಲಿ ವೇದಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ಕಿತ್ತೂರು ಚೆನ್ನಮ್ಮ ಝಾನ್ಸಿಯ ರಾಣಿಗಿಂತ ನಲವತ್ತು ವರ್ಷಗಳ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತುಪಡಿಸಬೇಕಿದೆ.

ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಅವರದು ತಾಯಿ-ಮಗನ‌ ಸಂಬಂಧ. ಬ್ರಿಟೀಷರ ಕುತಂತ್ರಕ್ಕೆ ರಾಯಣ್ಣ ಸೆರೆಸಿಕ್ಕಾಗ‌ ಚೆನ್ನಮ್ಮ ಅಧೀರಳಾಗುತ್ತಾಳೆ.

ಸತ್ಯ, ನ್ಯಾಯ‌ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ. ದೇಶವನ್ನು ಆಂತರಿಕ ಮತ್ತು ‌ಬಾಹ್ಯಶಕ್ತಿಗಳಿಂದ ರಕ್ಷಿಸಬೇಕಿದೆ. ಈ‌ ನಿಟ್ಟಿನಲ್ಲಿ ‌ಶ್ರಮಿಸುತ್ತಿರುವ ಪ್ರಧಾನಮಂತ್ರಿಗಳು ದೇಶವನ್ನು ಸಶಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

Leave a Reply