ಪ್ರವಾಹದ ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿಡಿಯೋ ಸಂವಾದ ಮೂಲಕ ಗುರುವಾರ(ಮೇ 5 ) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೆರೆಹಾವಳಿ, ಬರ, ಸಂಭವನೀಯ ಕೋವಿಡ್ ನಾಲ್ಕನೇ ಅಲೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ರೂಪಿಸಬೇಕು ಎಂದರು.
ತಹಶೀಲ್ದಾರರು ಕೂಡಲೇ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ವಿಪತ್ತು ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಬೇಕು.
ಇದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೂಡ ಸಭೆಯನ್ನು ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
- Advertisement -
ಬೋಟ್ ಲಭ್ಯತೆ ಮಾಹಿತಿ ಒದಗಿಸಲು ಸೂಚನೆ: ಪ್ರವಾಹ ಸಂದರ್ಭದಲ್ಲಿ ನದಿತೀರದ ಗ್ರಾಮಗಳ ಜನರ ರಕ್ಷಣೆಗೆ ಅಗತ್ಯವಿರುವ ಬೋಟ್ ಗಳ ಬಗ್ಗೆ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ಒದಗಿಸಬೇಕು.ಅಗತ್ಯವಿರುವ ಬೋಟ್ ಗಳು ಲಭ್ಯವಿಲ್ಲದಿದ್ದರೆ ಕೂಡಲೇ ಬೋಟ್ ಒದಗಿಸಲಾಗುವುದು. ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ಆರೋಗ್ಯ, ಪೊಲೀಸ್, ಗೃಹರಕ್ಷಕ ಸೇರಿದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಂಟ್ರೋಲ್ ರೂಮ್ ಸ್ಥಾಪನೆ; ಔಷಧ ಸಾಮಗ್ರಿ ದಾಸ್ತಾನು : ತುರ್ತು ಸಂದರ್ಭದಲ್ಲಿ ತಕ್ಷಣವೇ ಕಂಟ್ರೋಲ್ ರೂಮ್ ಆರಂಭಿಸಬೇಕಾಗುತ್ತದೆ. ಆದ್ದರಿಂದ ಕಂಟ್ರೋಲ್ ಸ್ಥಾಪನೆ, ಅದಕ್ಕೆ ಅಗತ್ಯವಿರುವ ಅಧಿಕಾರಿ/ಸಿಬ್ಬಂದಿ ನಿಯೋಜನೆಯನ್ನು ಮುಂಚಿತವಾಗಿ ಮಾಡಿಕೊಳ್ಳಬೇಕು. ಪರಿಸ್ಥಿತಿ ಆಧರಿಸಿ ಕೂಡಲೇ ಕಂಟ್ರೋಲ್ ರೂಮ್ ಆರಂಭಿಸಬೇಕು.
ಪ್ರವಾಹ ಸಂದರ್ಭದಲ್ಲಿ ಅಗತ್ಯವಾದ ಔಷಧ ಸಾಮಗ್ರಿಗಳು, ಇತರೆ ಸಾಮಗ್ರಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ತಕ್ಷಣವೇ ನಿಯೋಜಿಸಲು ಅನುಕೂಲವಾಗುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡಗಳನ್ನು ರಚಿಸಬೇಕು.
ಹಾವು ಮತ್ತಿತರ ವಿಷಜಂತುಗಳು ಕಡಿದಾಗ ಚಿಕಿತ್ಸೆಗೆ ಬೇಕಾದ ಔಷಧ ಸಾಮಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು.
ವಿದ್ಯುತ್ ಸಂಪರ್ಕ ಕಡಿತಗೊಂಡಾಗ ತುರ್ತು ದುರಸ್ತಿಗೆ ತಂಡಗಳನ್ನು ರಚಿಸಬೇಕು. ವಿದ್ಯುತ್ ಕಂಬಗಳು, ತಂತಿ, ವಾಹನ ಮತ್ತಿತರ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ನೀರು ಬಿಡುಗಡೆ; ಪರಸ್ಪರ ಮಾಹಿತಿ ವಿನಿಮಯಕ್ಕೆ ತಂಡ ರಚಿಸಲು ಸೂಚನೆ: ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಜಲಾಶಯಗಳ ಹಿರಿಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು.
ನೆರೆಯ ಮಹಾರಾಷ್ಟ್ರದ ಮಳೆಯ ಪ್ರಮಾಣ ಮತ್ತು ಕೊಯ್ನಾ ಸೇರಿದಂತೆ ಇತರೆ ಜಲಾಶಯಗಳಿಂದ ನೀರು ಬಿಡುಗಡೆ ಸಂದರ್ಭದಲ್ಲಿ ಮುಂಚಿತವಾಗಿ ಮಾಹಿತಿಯನ್ನು ಪರಸ್ಪರವಾಗಿ ವಿನಿಮಯ ಮಾಡಿಕೊಳ್ಳಬೇಕು. ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮುಂಚಿತವಾಗಿ ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸಭೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.
ಮಾನವ ಜೀವಹಾನಿ, ಜಾನುವಾರು ಜೀವಹಾನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೂಡಲೇ ಕುಟುಂಬದ ವಾರಸುದಾರರಿಗೆ ಪರಿಹಾರ ತುರ್ತಾಗಿ ವಿವರಿಸಬೇಕು. ವಿನಾಕಾರಣ ವಿಳಂಬ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ಪ್ರತಿ ತಾಲ್ಲೂಕುವಾರು ಗುರುತಿಸಲಾಗಿರುವ ಕಾಳಜಿ ಕೇಂದ್ರಗಳ ಪಟ್ಟಿ, ಎಷ್ಟು ಜನರಿಗೆ ಅಲ್ಲಿ ಅವಕಾಶ ಕಲ್ಪಿಸಬಹುದು ಎಂಬುದು ಸೇರಿದಂತೆ ಎಲ್ಲ ಬಗೆಯ ಮಾಹಿತಿಯನ್ನು ಹೊಂದಿರುವ ಕಿರುಪುಸ್ತಿಕೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್.ವಿ ತಿಳಿಸಿದರು.
ತುರ್ತು ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುವಂತೆ ಖಾಸಗಿ ಬೋರ್ ವೆಲ್ ಹಾಗೂ ಟ್ಯಾಂಕರ್ ಗಳನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****