ಮೈಸೂರು ರಾಜ್ಯಕ್ಕೆ (Mysuru State ) ಕರ್ನಾಟಕ (Karnataka) ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ (Kannada Rajyotsav) ವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಮನೆಗಳ ಮುಂದೆ ರಂಗೋಲಿ ಹಾಕಿ, ಗಾಳಿಪಟಗಳನ್ನು ಹಾರಿಸಿ, ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸುವುದರೊಂದಿಗೆ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ (DC Nitesh Patil) ಮನವಿ ಮಾಡಿಕೊಂಡಿದ್ದಾರೆ.
ನವೆಂಬರ್ 1 ರಂದು ಬೆಳಗಾವಿ (BELAGAVI) ಜಿಲ್ಲೆಯ ಎಲ್ಲರೂ ತಮ್ಮ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ “ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಘೋಷವಾಕ್ಯವನ್ನು ಬರೆಯುವಂತೆ ಅವರು ವಿನಂತಿಸಿದ್ದಾರೆ.
ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯದ ಎಲ್ಲ ಆಕಾಶವಾಣಿ ಕೇಂದ್ರಗಳಿಂದ ನಾಡಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ನಾಗರಿಕರು ನಾಡಗೀತೆ ಪ್ರಸಾರವಾಗುವ ಸಂದರ್ಭದಲ್ಲಿ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೆ ಗೌರವ ಸಲ್ಲಿಸಬೇಕು.
ನವೆಂಬರ್ 1 ರಂದು ಸಂಜೆ 5 ಗಂಟೆಗೆ ಎಲ್ಲ ಗ್ರಾಮಗಳ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಧದ ಗಾಳಿಪಟಗಳನ್ನು ಹಾರಿಸುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವವನ್ನು ಆಚರಿಸಬೇಕು ಎಂದು ತಿಳಿಸಿದ್ದಾರೆ.
ಅದೇ ರೀತಿ ನವೆಂಬರ್ 1 ರಂದು ಸಂಜೆ 7 ಗಂಟೆಗೆ ಪ್ರತಿಯೊಬ್ಬರು ತಮ್ಮ ಮನೆಗಳು, ಕಚೇರಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಾಗರಿಕರಲ್ಲಿ ಮನವಿ ಮಾನವಿಕೊಂಡಿದ್ದಾರೆ.
ಜಿಲ್ಲೆಯ ಎಲ್ಲ ನಾಗರಿಕರು, ಸಂಘ-ಸಂಸ್ಥೆಗಳು ರಂಗೋಲಿ, ಗಾಳಿಪಟ ಉತ್ಸವ ಹಾಗೂ ಕನ್ನಡಜ್ಯೋತಿ ಬೆಳಗುವ ಮೂಲಕ ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.